[go: up one dir, main page]

ವಿಷಯಕ್ಕೆ ಹೋಗು

ಅಗೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮರಿಲಿಡೇಸೀ

ಅಮರಿಲಿಡೇಸೀ(Amaryllidaceae) ಅಥವಾ ಅಗೇವೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಉಪಯುಕ್ತ ಸಸ್ಯ. ಇದಕ್ಕೆ ಕತ್ತಾಳೆ ಎಂಬ ಹೆಸರೂ ಇದೆ. ಇದರಲ್ಲಿ ಸು. 500ಕ್ಕೂ ಹೆಚ್ಚಿನ ಬಗೆಗಳಿವೆ. ಇವು ಮಧ್ಯಅಮೆರಿಕದ ಮೂಲದವು. ನಮ್ಮ ದೇಶದಲ್ಲಿ ಸರ್ವೆಸಾಮಾನ್ಯವಾಗಿರುವ ಕತ್ತಾಳೆ ಅಗೇವ್ಅಮೆರಿಕಾನ ಪ್ರಭೇದಕ್ಕೆ ಸೇರಿದ್ದು. ಸುಮಾರು 15ನೆಯ ಶತಮಾನದಲ್ಲಿ ಕೆಲವು ಜಾತಿಯವನ್ನು ಪೋರ್ಚುಗೀಸ್ ನಾವಿಕರು ಭಾರತ ದೇಶಕ್ಕೆ ತಂದರೆನ್ನಲಾಗಿದೆ.

ಸಸ್ಯದ ವಿವರಣೆ

[ಬದಲಾಯಿಸಿ]

ಇವು ದೀರ್ಘಾವಧಿಯ ಬದುಕುವ ಚಿಕ್ಕ, ದೊಡ್ಡ ಪೊದೆಗಳಾಗಿ ಬೆಳೆಯುತ್ತವೆ. ವೃತ್ತಾಕಾರದಲ್ಲಿರುವ ಕಾಂಡದ ತುದಿಯಲ್ಲಿ ಎಲೆಗಳು ಗುಲಾಬಿ ದಳಗಳ ಮಾದರಿಯಲ್ಲಿ ಗುಂಪಾಗಿರುತ್ತವೆ. ಮೊಸು ಕಾಂಡದ ತುದಿಯಲ್ಲಿ ಎಳೆಯ ಎಲೆಗಳಿಂದ ಆವರಿಸಿಕೊಂಡಿರುತ್ತದೆ. ಎಳೆಯ ಎಲೆಗಳ ಕೆಳಭಾಗದಲ್ಲಿ ಹಿರಿಯ ಎಲೆಗಳು ಇರುತ್ತವೆ. ತಳಭಾಗದ ಅತ್ಯಂತ ಹಿರಿಯ ವಯಸ್ಸಿನ ಎಲೆಗಳು ವಯಸ್ಸಾದಂತೆ ಒಣಗಿ ಕಾಂಡಕ್ಕೆ ಅಂಟಿಕೊಂಡಿದ್ದು ನೇತಾಡುತ್ತಿರುತ್ತವೆ. ಎಳೆಯ ಎಲೆಗಳು ನೇರವಾಗಿ ನಿಂತಿದ್ದು, ಬಲಿತಂತೆ ಕೆಳಭಾಗಕ್ಕೆ ಬಾಗಿ, ಅನಂತರ ನೆಲಕ್ಕೆ ಸಮಾನಾಂತರವಾಗಿ, ಕೊನೆಗೆ ನೇತಾಡುತ್ತ ಒಣಗುತ್ತವೆ. ಎಲೆಗಳು ಕತ್ತಿಯ ಆಕಾರದವು. ಇವುಗಳ ಅಂಚುಗಳು ನಯವಾಗಿ ಅಥವಾ ಮುಳ್ಳುಗಳಿಂದ ಕೂಡಿರುತ್ತವೆ ಎಲೆಗಳ ತುದಿ ಮತ್ತು ಅಂಚುಗಳಲ್ಲಿ ಮುಳ್ಳುಗಳಿರುವುದು ಪ್ರಭೇದ ಸೂಚಕ. ಕೆಲವು ಪ್ರಭೇದಗಳು ಮುಳ್ಳುಗಳು ಇಲ್ಲದೆಯೂ ಇರುತ್ತವೆ. ಎಲೆಗಳ ಉದ್ದಕ್ಕೂ ಒಳಗೆ ಎಳೆ ಎಳೆಯಾದ ನಾರಿರುತ್ತದೆ. ಇದು ತನ್ನ ಜೀವನದ ಅಂತಿಮಘಟ್ಟದಲ್ಲಿ ಒಂದು ಸಲ ಹೂಬಿಟ್ಟು ಅನಂತರ ಸತ್ತುಹೋಗುತ್ತದೆ. ಹೂಗೊಂಚಲು ಸಸ್ಯಮಧ್ಯದಲ್ಲಿ ಹೊರಬಂದು ಸು. 2-3ಮೀ ಉದ್ದವಾದ ಕಂಬದಂತೆ ಕಾಣುತ್ತದೆ. ಅಂತ್ಯಾರಂಭಿ ಹೂಗಳು ಗೊಂಚಲಿನಲ್ಲಿ ಬಿಡಿಯಾಗಿದ್ದು ಬಲಿತ ಅನಂತರ ಬಲ್ಬಿಲ್ಗಳಾಗಿ (ಗೆಡ್ಡೆ) ಪರಿಣಮಿಸುತ್ತವೆ. ಬಲ್ಬಿಲ್ಗಳು ಬಲಿತು ಉದುರಿ ವಂಶಾಭಿವೃದ್ಧಿಯಾಗುವುದೂ ಉಂಟು. ಕೆಲವು ಸಾರಿ ಹೂಗಳು ಬೀಜಗಳನ್ನು ಕೊಡುತ್ತವೆ. ಹೂ ಬಿಡಲು ಬೇಕಾಗುವ ಅವಧಿ ಪ್ರಭೇದಗಳನ್ನು ಅನುಸರಿಸಿ 10-100 ವರ್ಷಗಳ ಅಂತರವಾಗಬಹುದು. ನೂರು ವರ್ಷಕ್ಕೆ ಹೂಬಿಡುವ ಅಗೇವ್ ಅಮೆರಿಕಾದ ಪ್ರಭೇದವನ್ನು ಶತಾಯುಸಸ್ಯ (ಸೆಂಚುರಿ ಪ್ಲಾಂಟ್) ಎಂದು ಕರೆಯುತ್ತಾರೆ. ಉದ್ದವಾದ ಕಂಬದ ತುದಿಯಲ್ಲಿ ಹೂಬಿಟ್ಟಿರುವ ಗಿಡ ರಮ್ಯವಾಗಿ ಕಾಣುತ್ತದೆ. ಈ ಸಸ್ಯಗಳು ಪಕ್ಕದಲ್ಲಿ ಮೊಸುಗಳನ್ನು ಹೊರಡಿಸುವುವು.

ಪ್ರಭೇದಗಳು, ತಳಿಗಳು

[ಬದಲಾಯಿಸಿ]

ಅಗೇವಿ ಅಮೆರಿಕನ

[ಬದಲಾಯಿಸಿ]

ಇದಕ್ಕೆ ಅಮೆರಿಕ ಕತ್ತಾಳೆ ಎಂಬ ಹೆಸರು ಬಳಕೆಯಲ್ಲಿದೆ. ಇದು ಒಂದು ಸಾಮಾನ್ಯ ಪ್ರಭೇದ. ಭಾರತ ದೇಶದ ಎಲ್ಲ ಭಾಗಗಳಲ್ಲೂ ಬೆಳೆಯುತ್ತದೆ. ಇದನ್ನು ತೋಟ, ಹೊಲಗಳಲ್ಲಿ ಬೇಲಿ ಹಾಕುವುದಕ್ಕೆ ಉಪಯೋಗಿಸುತ್ತಾರೆ. ಎಲೆಯ ಅಂಚುಗಳು ಅಲೆಯಲೆಯಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ. ನಾರಿನ ಪ್ರಮಾಣ ಅಧಿಕವಾಗಿರುವ ಕಾರಣ ಹಳ್ಳಿಗಳ ಕಡೆ ಇದನ್ನು ಬೆಳೆಸುತ್ತಾರೆ. ಇದು ಗಟ್ಟಿಮುಟ್ಟಾಗಿದ್ದು ಮಳೆಯನ್ನೇ ಆಶ್ರಯಿಸಿ ಬೆಳೆದು, ಯಥೇಚ್ಛವಾಗಿ ಮೊಸುಗಳನ್ನು ಕೊಟ್ಟು ಸುಲಭವಾಗಿ ವೃದ್ಧಿಯಾಗುವುದರಿಂದ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಇವುಗಳ ಪೈಕಿ ಕೆಲವು ಅಲಂಕಾರ ತಳಿಗಳಿವೆ.

ಅಗೇವಿ ಅಮೆರಿಕನ ವರ್ಜಿನೇಟ

[ಬದಲಾಯಿಸಿ]

ಈ ತಳಿಯ ಎಲೆಯ ಅಂಚುಗಳ ಬಣ್ಣ ಚಿನ್ನದ ಹಳದಿ. ಇದನ್ನು ಎಲ್ಲ ಉದ್ಯಾನವನಗಳಲ್ಲೂ ಬೆಳೆಯುತ್ತಾರೆ. ನಾರಿನ ಪ್ರಮಾಣ ಕಡಿಮೆ. ಆದ್ದರಿಂದ ಅಲಂಕಾರ ಸಸ್ಯವಾಗಿ ಮಾತ್ರ ಖ್ಯಾತಿ ಪಡೆದಿದೆ. ಇದರ ಪ್ರಭೇದವಾದ ಅಲ್ಬ ಎಂಬ ತಳಿಯಲ್ಲಿ ಎಲೆಗಳ ಅಂಚುಗಳ ಬಣ್ಣ ಬಿಳುಪು ಅಥವಾ ಕಡುಗೆಂಪು. ಪ್ಯಾಲಿಡ ಎಂಬ ತಳಿಯಲ್ಲಿ ಎಲೆಯ ಅಂಚುಗಳು ಬಿಳಿಚಿಕೊಂಡಿರುವ ಹಸಿರು ಬಣ್ಣದವಾಗಿವೆ. ಮಿಡಿಯೊಪಿಕ್ಟ ಎಂಬ ತಳಿಯಲ್ಲಿ ಎಲೆಯ ಮಧ್ಯದಲ್ಲಿ ಹಳದಿ ಮತ್ತು ಹಸಿರುಗೆರೆಗಳು ಇರುತ್ತವೆ. ಸ್ಟ್ರಿಯೇಟ ಎಂಬ ತಳಿಯಲ್ಲಿ ಎಲೆಯ ಮಧ್ಯದಲ್ಲಿ ಕಿರದಾದ ಕೆನೆಯ ಬಣ್ಣದ ಗೆರೆಗಳು ಇರುತ್ತವೆ.

ಅಗೇವಿ ಅಪ್ಲನಟ

[ಬದಲಾಯಿಸಿ]

ಈ ಪ್ರಭೇದ ಮೆಕ್ಸಿಕೊ ದೇಶದ ಮೂಲದ್ದು. ಎಲೆಯ ಬುಡಗಳು ಪರಸ್ಪರ ಬಹಳ ಹತ್ತಿರಹತ್ತಿರವಿರುತ್ತವೆ. ಗಿಡ ಕಡಿಮೆ ಮೊಸುಗಳನ್ನು ಕೊಡುತ್ತದೆ. ನೀಳವಾದ ಎಲೆಯ ತುದಿಯಲ್ಲಿ ಸು. 9ಸೆಂ.ಮೀ ಉದ್ದವಾದ ಕಪ್ಪುಮಿಶ್ರಿತ ಕಂದು ಮುಳ್ಳು ಇದೆ. ಅಂಚಿನಲ್ಲಿರುವ ಮುಳ್ಳುಗಳು ದೃಢವಾಗಿದ್ದು ಹಿಂದಕ್ಕೆ ಬಾಗಿರುತ್ತವೆ. ಇವುಗಳ ಬಣ್ಣ ಬೂದು ಅಥವಾ ಬಿಳುಪಾಗಿದ್ದು ಸುಂದರವಾಗಿ ಕಾಣುತ್ತವೆ.

ಅಗೇವಿ ಹಾರಿಡ

[ಬದಲಾಯಿಸಿ]

ಈ ಪ್ರಭೇದದಲ್ಲಿ ಅಧಿಕಸಂಖ್ಯೆಯಲ್ಲಿ ಎಲೆಗಳು ಗುಂಪುಗೂಡಿರುತ್ತವೆ. ಇದರ ಎಲೆಗಳು ಗಾಜುಹಸಿರುಬಣ್ಣವಾಗಿದ್ದು ಅಂಚುಗಳ ಮುಳ್ಳುಗಳು ದಪ್ಪವಾಗಿ ಎರಡು ಕಡೆಗೂ ಬಾಗಿರುತ್ತವೆ; ತುದಿ ಮುಳ್ಳು ಸು. 3ಸೆಂಮೀ.

ಅಗೇವಿ ಸಿಸಲಾನಾ

[ಬದಲಾಯಿಸಿ]

ಈ ಪ್ರಭೇದದ ಜನ್ಮಸ್ಥಾನ ಖಚಿತವಾಗಿ ತಿಳಿದುಬಂದಿಲ್ಲ. ಇದನ್ನು ನಾರುಬೆಳೆಯಾಗಿ ಬೆಳೆಸುತ್ತಾರೆ. ದಪ್ಪವಾಗಿ ಕಿರಿದಾಗಿರುವ ಉದ್ದವಾದ ಎಲೆಗಳ ಗುಂಪು ಇತರ ಪ್ರಭೇದಗಳಲ್ಲಿರುವಂತೆಯೇ ಇರುತ್ತದೆ. ಅಂಚುಗಳಲ್ಲಿ ಮುಳ್ಳುಗಳು ಇರುವುದಿಲ್ಲ; ತುದಿಯಲ್ಲಿ ಮಾತ್ರ ಚಿಕ್ಕದಾಗಿರುವ ಮುಳ್ಳುಗಳು ಇರುತ್ತವೆ. ಈ ಗಿಡಗಳನ್ನು ಮೊಸುಗಳಿಂದ ವೃದ್ಧಿಮಾಡುತ್ತಾರೆ.

ಅಗೇವಿ ಫಿಲಿಫೆರ

[ಬದಲಾಯಿಸಿ]

ಈ ಪ್ರಭೇದ ಮೆಕ್ಸಿಕೊ ದೇಶದ್ದು. ಹೂಗೊಂಚಲು ತೆನೆಯ ಮಾದರಿಯದು. ಎಲೆಗಳಲ್ಲಿ ಬಿಳಿಯ ಗೆರೆಗಳು ಇದ್ದು ಮುಳ್ಳುಗಳಿಲ್ಲದೆ ಅಗಲವಾಗಿ ತೇರಿನಂತಿರುವ ಹೂಗೊಂಚಲನ್ನು ಬಿಡುವುದರಿಂದ ಇದು ಅಲಂಕಾರ ಸಸ್ಯವಾಗಿ ಪ್ರಸಿದ್ಧಿ ಪಡೆದಿದೆ.

ಅಗೇವಿ ವಿಕ್ಟೋರಿಯ ರಿಜಿನೆ

[ಬದಲಾಯಿಸಿ]

ಈ ಪ್ರಭೇದವು ಅತ್ಯಂತ ಸುಂದರವಾದ ಉದ್ಯಾನಸಸ್ಯಗಳಲ್ಲೊಂದು. ಅಗಲವಾದ ವೃತ್ತಾಕಾರದಲ್ಲಿ ಎಲೆಗಳು ಗುಂಪುಗೂಡಿರುತ್ತವೆ. ಮೊಸುಗಳನ್ನು ಕೊಡುವುದಿಲ್ಲವಾದ್ದರಿಂದ ಬೀಜಗಳಿಂದ ಮಾತ್ರ ಈ ಬಗೆಯವನ್ನು ವೃದ್ಧಿಮಾಡಬಹುದು. ಸಂಖ್ಯೆಯಲ್ಲಿ ಅಧಿಕವಾಗಿರುವ ಎಲೆಗಳು 12-20 ಸೆಂ.ಮೀ. ಉದ್ದವಾಗಿರುತ್ತವೆ. ಬಣ್ಣ ಮಾಸಲುಹಸಿರು; ಎರಡು ಕಡೆಗಳ ಅಂಚುಗಳ ಮಧ್ಯಭಾಗ ಸ್ವಲ್ಪ ತಗ್ಗಾಗಿರುವುದರಿಂದ ಕಾಲುವೆಯಂತೆ ಕಾಣುತ್ತದೆ. ಎಲೆಯ ತುದಿಯ ಭಾಗ ಕೂಡ ಸ್ವಲ್ಪ ಮೇಲುಭಾಗಕ್ಕೆ ಬಾಗಿರುತ್ತದೆ. ಎಲೆಗಳ ಮೇಲುಭಾಗದ ಅಂಚುಗಳಲ್ಲಿರುವ ಬಿಳಿಯ ಗೆರೆಗಳೂ ಮಧ್ಯಭಾಗದಲ್ಲಿರುವ ಬಿಳಿ ರೇಖಾವಿನ್ಯಾಸಗಳೂ ಈ ಗಿಡಗಳು ಸುಂದರವಾಗಿ ಕಾಣಲು ಕಾರಣವೆನಿಸಿವೆ. ಎಲೆಯ ಬುಡದ ಅಗಲಕ್ಕಿಂತ ತುದಿಯ ಅಗಲ ಸ್ವಲ್ಪ ಕಡಿಮೆಯಾಗಿದ್ದು ಮುಳ್ಳುಗಳಲ್ಲಿ ಮುಗಿಯುವುದರಿಂದ ಗಿಡದ ಅಂದಕ್ಕೆ ಪುಟಕೊಟ್ಟಂತಾಗುತ್ತದೆ. ಹೂಗೊಂಚಲು ಸು. 3 ಮೀ. ಎತ್ತರದ್ದು.

ಉಪಯೋಗಗಳು

[ಬದಲಾಯಿಸಿ]

ಈ ಸಸ್ಯಗಳು ಮಾನವಜನಾಂಗಕ್ಕೆ ಅನೇಕ ವಿಧಗಳಲ್ಲಿ ಉಪಯುಕ್ತವೆನಿಸಿವೆ. ಬರಗಾಲದಲ್ಲಿ ಕತ್ತಾಳೆಗೆಡ್ಡೆಯನ್ನು ತಿಂದು ತಮ್ಮ ಜೀವವನ್ನು ಉಳಿಸಿಕೊಂಡಿರುವ ಉದಾಹರಣೆಗಳು ಇವೆ. ಇದು ಒಳ್ಳೆಯ ಬೇಲಿಯಾಗುತ್ತದೆ. ಅಲಂಕಾರ ಸಸ್ಯವಾಗೂ ಇದನ್ನು ಬೆಳೆಸುತ್ತಾರೆ. ಕೆಲವು ಔಷಧಗಳಿಗೂ ಇದನ್ನು ಬಳಸುತ್ತಾರೆ. ಎಲೆ (ಪಟ್ಟಿ)ಗಳಿಂದ ತೆಗೆದ ನಾರು ಹಗ್ಗಮಾಡಲು ಬರುತ್ತದೆ; ಇದು ಅನೇಕ ಕುಟುಂಬಗಳ ಗೃಹಕೈಗಾರಿಕೆಯಾಗಿ ಪರಿಣಮಿಸಿದೆ. ಕತ್ತಾಳೆಗಳನ್ನು ಮಟ್ಟವಲ್ಲದ ಭೂಮಿಯ ಬದುಗಳಲ್ಲಿನ ಭೂಸವೆತವನ್ನು ತಡೆಯುವುದಕ್ಕೂ ಬೆಳೆಸುತ್ತಾರೆ. ಇವು ನೀರು, ಗೊಬ್ಬರ, ಕಾಲಿಕಸಂರಕ್ಷಣೆ ಮುಂತಾದ ಉಪಚಾರಗಳೇ ಇಲ್ಲದೆ ಸಮೃದ್ಧಿಯಾಗಿ ಬೆಳೆಯುತ್ತವೆ. ಕೆಲವು ಸಸ್ಯಗಳ ಎಲೆಗಳಿಂದ ತೆಗೆದ ರಸದಲ್ಲಿ ಸು. ಶೇ. 15ರಷ್ಟು ಸಕ್ಕರೆ ಅಂಶವಿರುವುದರಿಂದ ಹುಳಿಬರಿಸಿ ಮದ್ಯ ತಯಾರಿಸಬಹುದಾಗಿದೆ.

"https://kn.wikipedia.org/w/index.php?title=ಅಗೇವಿ&oldid=859403" ಇಂದ ಪಡೆಯಲ್ಪಟ್ಟಿದೆ